ಸೋಮವಾರ, ಸೆಪ್ಟೆಂಬರ್ 9, 2013

ಮಾತಿಲ್ಲ...ಕತೆಯಿಲ್ಲ

ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು    
ಸಿ.ಪಿ.ನಾಗರಾಜ
ಮಂಗಳವಾರ, 13 ಆಗಸ್ಟ್ 2013 (08:21 IST) 
ಕಳೆದ  ಹಲವಾರು  ವರುಶಗಳಲ್ಲಿ   ನಡೆದ   ಮೂರು   ಪ್ರಸಂಗಗಳನ್ನು   ಇಲ್ಲಿ   ಹೇಳುತ್ತಿದ್ದೇನೆ .
ಪ್ರಸಂಗ-೧
ಒಂದು  ದಿನ  ಬೆಳ್ಳಂಬೆಳಗ್ಗೆ   ಕಾಳಮುದ್ದನ ದೊಡ್ಡಿಯಿಂದ    ಮಂಡ್ಯಕ್ಕೆ   ಹೋಗಲೆಂದು  ಬಸ್ಸುಗಳು   ನಿಲ್ಲುವ   ಜಾಗದ   ರಸ್ತೆ   ಬದಿಗೆ   ಬಂದು   ನಿಂತೆನು . ದೊಡ್ಡದಾಗಿದ್ದ   ಆ   ಜಾಗದಲ್ಲಿ   ನಾಲ್ಕೈದು   ಗೂಡೆಗಳನ್ನು  ಇಟ್ಟುಕೊಂಡು  ಒಬ್ಬ  ರೈತ   ಕುಳಿತಿದ್ದ .  ಅವನ   ಬಳಿಗೆ   ಬಂದ   ವ್ಯಾಪಾರಿಯೊಬ್ಬ   ಅವನನ್ನು   ಕುರಿತು -
" ಯಾವೂರಯ್ಯ  ? " ಎಂದ .
" ಕಳ್ಳಿಮೆಳೆದೊಡ್ಡಿ    ಕಣ್    ಬಾಪ್ಪ . "
" ಟೆಂಬಟೆ  ಇಲ್ಲೇ   ಮಾರ್ತಿಯೋ .......  ಇಲ್ಲ   ಮಂಡ್ಯದ   ಮಾರ್ಕೆಟ್ಟಿಗೋ ? "
" ಸರಿಯಾದ   ರೇಟ್  ಬಂದ್ರೆ   ಇಲ್ಲೇ   ಕೊಡ್ತೀನಿ ....... ಇಲ್ದೇದ್ರೆ   ಮಂಡ್ಯಕ್ಕೆ   ಹೊಯ್ತಿನಿ . "
" ಹಂಗಾದ್ರೆ   ಅದೇನ್  ಒಂದ್  ರೇಟ್   ಹೇಳು  ಮಂತೆ  ."
ರೈತನು  ತಾನು   ಬೆಳೆದ  ಟೊಮೊಟೊ   ಹಣ್ಣನ್ನು   ಮಾರಲೆಂದು    ಹಳ್ಳಿಯಿಂದ   ಬಂದಿದ್ದ .  ಈಗ  ತನ್ನ   ಗೂಡೆಗಳ   ಕಡೆಗೆ   ಮತ್ತೊಮ್ಮೆ   ನೋಡಿ-
" ಹಣ್ಣು  ತುಂಬಾ  ಚೆಂದಾಗವೆ .  ಒಂದ್ಸತಿ   ನೀನು   ನೋಡು . ಆಮ್ಯಾಲೆ   ರೇಟ್   ಹೇಳ್ತಿನಿ  ."
" ನೋಡೋದೇನ  ..... ಮ್ಯಾಲೆಯೇ   ಕಾಣ್ತಾವಲ್ಲ . ಹೇಳು  ಒಂದು  ರೇಟ್ನ  "
" ನಿಂಗೆ  ಎಷ್ಟು  ಗೂಡೆ  ಬೇಕು ."
" ಎಲ್ಲಾನು   ಸೇರ್ಸೆ   ರೇಟ್   ಹೇಳಯ್ಯ ."
ಈಗ  ರೈತ  ಒಂದೆರಡು  ಗಳಿಗೆ   ಮನದಲ್ಲಿಯೇ   ಅಳೆದು   ತೂಗಿ   ಒಂದು   ಮೊತ್ತವನ್ನು   ಹೇಳಿದ . ಇದನ್ನು   ಕೇಳುತ್ತಿದ್ದಂತೆಯೇ   ವ್ಯಾಪಾರಿಯು -
" ಓಹೊಹೋ...... ಏನು   ತೆಂಗಿನ ಮರದ  ಮ್ಯಾಲೆ   ಕುಂತಿದ್ದಿಯೇ ? "
" ನಾನೆಲ್ಲಾದ್ರೂ   ಕುಂತಿರ್ಲಿ..... ನೀನೊಂದು   ರೇಟ್   ಕೇಳೋ   ಮಾರಾಯ ."
" ಏ....ನಿನ್   ಜೊತೇಲಿ   ಯಾಪಾರ   ಮಾಡೋಕಾಗೋದಿಲ್ಲ  ಬುಡಪ್ಪ . ರೇಟ್   ಹೇಳಿ   ಏನು   ಪ್ರಯೋಜನ ?"
" ಇಲ್ಲ  ಕಣ್  ಕೇಳಯ್ಯ . ಕೇಳೂಕೇನ್  ಕಷ್ಟ . ನಾನೇನು  ನೀ  ಕೇಳ್ದಷ್ಟಕ್ಕೆ   ಕೊಟ್ಬುಟ್ಟನೆ ? "
ಈಗ  ವ್ಯಾಪಾರಿಯು  ಹಣ್ಣಿನ  ಗೂಡೆಗಳ  ಹತ್ತಿರ  ಬಂದು , ಒಂದೆರಡು  ಹಣ್ಣನ್ನು  ಮತ್ತೊಮ್ಮೆ  ನೋಡಿ ,  ಒಂದು  ಮೊತ್ತವನ್ನು  ಹೇಳಿದ . ಕೂಡಲೇ  ರೈತ -
" ನೀನು  ಐನಾತಿ   ಕುಳವೇ  ಬುಡು . "
" ಯಾಕಯ್ಯ ? "
" ಇನ್ನೇನ್   ಮಂತೆ ,  ನೀನು   ತೆಂಗಿನ   ಬುಡುತ್ತಾವು  ಕುಳೀತಿದ್ದೀಯಲ್ಲ ! "
ಈಗ  ಅವರಿಬ್ಬರ  ಚೌಕಾಸಿ  ವ್ಯಾಪಾರಕ್ಕೆ  ತೆಂಗಿನ  ಮರದ  ಬುಡ  ಮತ್ತು  ತುದಿಗಳು  ಎರಡು  ನೆಲೆಗಳಾಗಿದ್ದವು .  ವ್ಯಾಪಾರದ  ಮಾತು   ಮುಂದುವರಿದಂತೆಲ್ಲಾ   ನಡುನಡುವೆ , ಅವರಿಬ್ಬರೂ  ಒಂದೊಂದು  ಮೊತ್ತವನ್ನು  ಹೇಳುತ್ತಿದ್ದರು .  ಮೊತ್ತವನ್ನು  ಸೂಚಿಸುತ್ತಿದ್ದಂತೆಯೇ  - " ನೀನೊಸಿ  ಮ್ಯಾಕ್  ಬಾ " " ನೀನೊಸಿ  ಇಳಿದು  ಬಾ  ಕೆಳಕ್ಕೆ " - ಎಂಬ  ಮಾತುಗಳು  ತೂರಿಬರುತ್ತಿದ್ದವು . ಕಟ್ಟಕಡೆಗೆ  ರೈತನು -
" ಇನ್ನೆಷ್ಟು  ಅಂತ  ಇಳಿಯನಯ್ಯ ?  ಇನ್ನೂ  ಕಮ್ಮಿಯಾಗಿ  ಕೊಟ್ರೆ  ಏನ್  ತಾನೇ  ಸಿಕ್ಕದು  ನಂಗೆ ? ನಮ್ಮ  ರೈತರ  ನೋವು  ನಿಂಗೆ  ಹೆಂಗಪ್ಪ  ಗೊತ್ತಾದದು ? ಈ  ಬ್ಯಾಸ್ಗೇಲಿ  ಟೆಂಬಟೆ  ಬೆಳೀಬೇಕಾದ್ರೆ  ಎಷ್ಟು  ಕಷ್ಟ  ಗೊತ್ತೆ ? ಹಾಳಾದ್  ಕರೆಂಟ್  ಬ್ಯಾರೆ  ಸರಿಯಾದ  ಟೇಮಲ್ಲಿ  ಕೈಕೊಡ್ತದೆ......ಬರಬಾರದ್ದು  ರೋಗ  ಹಣ್ಣಿಗೆ  ಬತ್ತದೆ . ಅಂತಾದ್ದರಲ್ಲಿ  ಇಷ್ಟು  ಕಮ್ಮಿಯಾಗಿ  ಕೇಳ್ತಾಯಿದ್ದೀಯಲ್ಲ  ನ್ಯಾಯವೇನಯ್ಯ ? "
" ನಾನೇನು  ನಿನ್ನ  ಹಣ್  ತಕೊಂಡು  ಕುಬೇರ  ಆಗ್ಬುಟ್ಟನೆ !  ನಾನು  ತಳ್ಳುಗಾಡಿ   ಮ್ಯಾಲೆ  ತರಕಾರಿ  ಇಟ್ಕೊಂಡು  ಬಿಸ್ಲು  ಮಳೆ  ಅನ್ನದೇ  ಸಂಜೆ  ತಂಕ  ಊರೆಲ್ಲಾ  ತಿರುಗುದ್ರೆ  ತಾನೇ..... ನಂಗೂ  ಜೀವನ  ಮಾಡೋಕೆ  ಮೂರ್ಕಾಸು  ಸಿಗೂದು . "
" ಓ , ಏನೋ   ಒಬ್ಬೊಬ್ಬರದೂ  ಒಂದೊಂದು  ಹೊಡ್ಬಾಳು  ಬುಡಪ್ಪ " ಎಂದು  ನಿಟ್ಟುಸಿರು  ಬಿಡುತ್ತ  ,  ರೈತನು  ಈಗ  ಒಂದು  ಮೊತ್ತವನ್ನು  ಹೇಳಿದ . ಮತ್ತೆ  ಒಂದೆರಡು  ಬಾರಿ  ಚೌಕಾಸಿ  ನಡೆದು ,  ವ್ಯಾಪಾರಿಯು  ರೈತನಿಂದ  ಹಣ್ಣನ್ನು  ಕೊಂಡುಕೊಂಡನು .
ಪ್ರಸಂಗ-೨
ಒಂದು  ದಿನ  ಸಂಜೆ  ವೇಳೆ  ನನ್ನ  ಹೆಂಡತಿ  ಮತ್ತು  ಮಗನೊಡನೆ  ಕಾಳಮುದ್ದನದೊಡ್ಡಿಯ  ಪೇಟೆ  ಬೀದಿಗೆ  ಹೋದೆನು . ಬೀದಿ  ಬದಿಯಲ್ಲಿ  ಅನೇಕ  ಹೆಂಗಸರು  ಹಣ್ಣು-ತರಕಾರಿ  ಇಟ್ಟುಕೊಂಡು  ಮಾರಾಟ  ಮಾಡುತ್ತಿದ್ದರು .  ಅಲ್ಲಿ  ಒಂದೆಡೆಯಲ್ಲಿ  ನಿಂತುಕೊಂಡು  ನನ್ನ  ಹೆಂಡತಿ  ಒಂದು  ಪರಂಗಿ  ಹಣ್ಣನ್ನು  ತೋರಿಸುತ್ತಾ , ಅದರ  ರೇಟನ್ನು  ಕೇಳಿದಳು .
" ಎರಡು  ರೂಪಾಯಿ  ಆಯ್ತದೆ  ಕಣವ್ವ . "
" ಏನಮ್ಮ , ಇಷ್ಟು  ಸಣ್ಣದ್ದಕ್ಕೆ  ಎರಡು  ರೂಪಾಯೇ ? "
" ನಿಮಗೆ  ನಾನು  ಹೇಳಿರೂದು  ಕಮ್ಮಿ  ರೇಟು . ಇಂತದ  ಬ್ಯಾರೆ  ಕಡೆ  ನಾಲ್ಕು  ರೂಪಾಯಿಲ್ದೇ   ಕೊಡೂದಿಲ್ಲ . "
ನನ್ನ  ಹೆಂಡತಿ  ಮತ್ತು   ತರಕಾರಿ  ಅಮ್ಮನ  ನಡುವೆ  ಚೌಕಾಸಿ  ವ್ಯಾಪಾರ  ಮುಂದುವರಿಯುತ್ತಿದ್ದಾಗ  ,ಐದು  ವರುಷದ  ನನ್ನ  ಮಗ  ಅಲ್ಲಿ  ಜೋಡಿಸಿಟ್ಟಿದ್ದ   ಒಂದೆರಡು  ಹಣ್ಣುಗಳನ್ನು  ಕೈಯಿಂದ  ಮುಟ್ಟಿ  ಅಲ್ಲಾಡಿಸಿದ . ಇದನ್ನು  ಕಂಡ  ತರಕಾರಿ  ಅಮ್ಮನು -
" ಹಂಗೆಲ್ಲಾ  ಹಿಸುಕಬ್ಯಾಡ....ಹಣ್ಣು  ಹಾಳಾಗೊಯ್ತವೆ " ಎಂದು  ಗದರಿಸಿದಳು  . ನನ್ನ  ಹೆಂಡತಿಯು  ಮಗನನ್ನು  ಹಿಂದಕ್ಕೆ  ಎಳೆದುಕೊಳ್ಳುತ್ತಾ-
" ಏ.... ಹಂಗೆಲ್ಲಾ  ಮುಟ್ಟಬಾರದು . ಇತ್ತಗೆ  ಹಿಂದಕ್ಕೆ  ಬಾರೋ  ಚಿನ್ನ " ಎಂದಳು . ಕೂಡಲೇ  ತರಕಾರಿ  ಅಮ್ಮನು -  
" ಗಂಡಹೆಂಡ್ತಿ  ಇಬ್ಬರೂ  ಕೈತುಂಬಾ  ಸಂಬಳ  ಎಣಿಸ್ಕೊತೀರಿ . ಮಕ್ಕಳಿಗೆ  ಚಿನ್ನ  ಅಂತ್ಲು   ಹೆಸರಿಡ್ತೀರಿ.... ಬೆಳ್ಳಿ  ಅಂತಾನು  ಕರಿತೀರಿ ! " ಎಂದು  ಉದ್ಗಾರವೆಳೆದಳು . ಆಗ  ನಾನು  ನಗುತ್ತಾ-
"   ಇಬ್ಬರೂ  ಕೆಲಸದಲ್ಲಿ  ಇಲ್ಲ  ಕಣಮ್ಮ . ನನಗೊಬ್ಬನಿಗೆ  ಸಂಬಳ  ಬರೋದು . ನಮ್ಮ  ಮಗನ  ಹೆಸರು  ’ ಚಿನ್ಮಯ ’ ಅಂತ  ಕಣಮ್ಮ . ಚಿಕ್ಕದಾಗಿ ’ ಚಿನ್ನ ’ ಎಂತ  ಕರೀತಿವಿ . ನಮ್ಮ  ಹತ್ತಿರ  ನೀವು  ಹೇಳೂವಂಗೆ  ಯಾವ  ಸಂಪತ್ತು  ಇಲ್ಲ  ಕಣಮ್ಮ . "
ಈಗ  ನನ್ನ  ಹೆಂಡತಿ  ಮತ್ತೆ  ಕೇಳಿದಳು-
" ಎಷ್ಟಕ್ಕೆ  ಕೊಡ್ತಿಯೇ  ಹೇಳಮ್ಮ ."
" ಎಂಟಾಣೆ  ಕಮ್ಮಿ  ಕೊಡವ್ವ . ಅದಕ್ಕಿಂತ  ಕಮ್ಮಿಗೆ  ಕೇಳ್ಬೇಡ . ನಾವೂ  ಬೆಳಗ್ಗೆಯಿಂದ  ರಾತ್ರಿ  ತಂಕ  ತಲೆ  ಮ್ಯಾಲೆ  ಒಂದು  ನೆಳ್ಳು  ಇಲ್ದೇ  ಯಾಪಾರ  ಮಾಡ್ತೀವಿ  ಕಣವ್ವ . ನಮ್ಮ  ಕಷ್ಟ  ಕೇಳೋರು  ಯಾರಿದ್ದರು ? " ಎಂದು  ತನ್ನ  ಪಾಡನ್ನು  ಹೇಳಿಕೊಂಡಳು . ಈಗ  ನನ್ನ  ಹೆಂಡತಿಯು   ಮತ್ತೆ  ಚೌಕಾಸಿಗೆ  ಹೋಗದೆ , ದುಡ್ಡನ್ನು  ಕೊಟ್ಟಾಗ , ಹಣ್ಣನ್ನು  ಕೈಗೆ  ಇಡುತ್ತಾ , ತರಕಾರಿ  ಅಮ್ಮ  ಕೇಳಿದಳು-
" ಮಕ್ಕಳು  ಎಷ್ಟು  ಜನ ? "
" ಇಬ್ಬರು "
" ಇನ್ನೊಂದು  ಗಂಡೋ  ಹೆಣ್ಣೋ ? "
ಅಷ್ಟರಲ್ಲಿ  ಅವರಿಬ್ಬರ  ಮಾತಿನ  ನಡುವೆ  ನಾನು  ತಲೆಹಾಕಿ -
" ಹೆಣ್ಣು  ಕಣಮ್ಮ . ಗೌತಮಿ  ಅಂತ  ಹೆಸರಿಟ್ಟಿದ್ದೀವಿ . ರತ್ನ....ವಜ್ರ   ಅಂತ  ಇಟ್ಟಿಲ್ಲ " ಎಂದಾಗ  , ಆಕೆಯು  ನಮ್ಮೊಡನೆ  ಬಾಯ್ತುಂಬ  ನಕ್ಕಳು .
 ಪ್ರಸಂಗ-೩
ಕಳೆದ  ಆರೇಳು  ವರ್ಷಗಳಿಂದ   ಬೆಂಗಳೂರಿನಲ್ಲಿ  ನೆಲೆಸಿದ್ದೇನೆ . ಇಲ್ಲಿಗೆ  ಬಂದ  ಮೇಲೆ  ದೊಡ್ಡ  ದೊಡ್ಡ  ಮಾಲ್ ಗಳಿಗೆ  ಹೋಗಿಬರುವುದು  ರೂಢಿಯಾಗಿದೆ. ಏನಾದರೂ  ತರಲೆಂದು  ಅಲ್ಲಿಗೆ  ಹೋದಾಗ , ಕಣ್ಣು  ಕೊರೈಸುವಂತಹ  ಅಲ್ಲಿನ  ವಾತಾವರಣದಲ್ಲಿ  ಒಂದೆರಡು  ಸುತ್ತು  ತಿರುಗಿ ,  ಒಂದೆಡೆ  ನಾನು  ಕುಳಿತುಕೊಳ್ಳುತ್ತೇನೆ . ನನ್ನ  ಹೆಂಡತಿಯು  ಅಲ್ಲಿರುವ  ವಸ್ತುಗಳ  ಮೇಲೆ  ಬರೆದಿರುವ  ರೇಟುಗಳನ್ನು  ಪರಿಶೀಲಿಸುತ್ತಾ , ಮನೆಗೆ  ಬೇಕಾದ  ಸಾಮಾನುಗಳನ್ನು  ಎತ್ತಿಕೊಂಡು  , ಕವರುಗಳಿಗೆ  ಹಾಕಿಕೊಂಡು , ತಳ್ಳುವ  ಗಾಡಿಯಲ್ಲಿ  ತುಂಬಿಕೊಂಡು  , ಬಿಲ್  ಹಾಕುವವರ  ಬಳಿಗೆ  ಬಂದು , ಹಣ ಕೊಟ್ಟು  ಹೊರಬರುತ್ತಾಳೆ . ಎಲ್ಲಿಯೂ  ಒಂದು  ಮಾತಿಲ್ಲ.... ನೋವುನಲಿವಿನ  ಮಾತುಕತೆಯಿಲ್ಲ ... ಯಾವುದೇ  ಚೌಕಾಸಿಯಿಲ್ಲ .... ಜೀವಭಾವಗಳಿಲ್ಲದ  ರೊಬಾಟ್ ಗಳಂತೆ  ಕೈಕಾಲು  ಅಲ್ಲಾಡಿಸುತ್ತಾ , ವ್ಯಾಪಾರ  ಮುಗಿಸಿಕೊಂಡು  ಬರುವ  ಯಂತ್ರಗಳಾಗಿದ್ದೇವೆ .
ಮೊನ್ನೆ  ಎಂದಿನಂತೆ  ಒಂದು  ಮಾಲ್ ಗೆ  ಹೋಗಿ ಬಂದಾಗ , ಮನೆಯಲ್ಲಿ  ನನ್ನ  ಹೆಂಡತಿಯು  ತಂದ  ಹಣ್ಣು-ತರಕಾರಿಗಳ   ಚೀಲದಲ್ಲಿದ್ದ   ಒಂದು  ಪರಂಗಿ  ಹಣ್ಣನ್ನು  ಕೈಗೆತ್ತಿಕೊಂಡು  ನೋಡಿದೆ . ಸುಲಿದ  ತೆಂಗಿನಕಾಯಿಗಿಂತ  ಸ್ವಲ್ಪ  ದಪ್ಪವಾಗಿದ್ದ   ಆ  ಹಣ್ಣಿನ  ಮೇಲೆ  ಅಂಟಿಸಿದ್ದ  ರೇಟನ್ನು  ಕಂಡು  ಗಾಬರಿಯಾಗಿ-
" ಏನೇ , ಇದಕ್ಕೆ  ಹದಿನೆಂಟು   ರೂಪಾಯ ? "
" ಹೂ ... ಹದಿನೆಂಟು  ರೂಪಾಯಿ ."
" ಯಾಕೆ  ಹದಿನೆಂಟು ? "
" ಅದರ  ಮೇಲೆ  ಬರೆದಿದೆ .... ಅದಕ್ಕೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ