ಮಂಗಳವಾರ, ಅಕ್ಟೋಬರ್ 22, 2013

ಕರಿಯನ ಪುರಾಣ


“ಏನ್ ನಾಗರಾಜಪ್ಪ ಚೆನ್ನಾಗಿದ್ದೀರಾ?“
ನನ್ನ ಒಳಿತನ್ನು ಕುರಿತು ವಿಚಾರಿಸುತ್ತಿರುವ ವ್ಯಕ್ತಿಯನ್ನು ಅರೆಗಳಿಗೆ ಅಚ್ಚರಿಯಿಂದ ನೋಡಿದ ನಂತರ -
“ಏನ್ ಕರಿಯ…  ನೀನು ಜೋರಾಗಿ ಮೀಸೆ ಬಿಟ್ಟಿರೂದರಿಂದ, ನಿನ್ನ ಗುರುತು ಹಿಡಿಯೂಕೆ ಆಗಲಿಲ್ಲ” ಎಂದೆ. ಆತ ನಗುತ್ತಾ, ತನ್ನ ತುಟಿಗಳ ಮೇಲೆ ಇಳಿಬಿದ್ದಿದ್ದ ಮೀಸೆಯ ಕೂದಲನ್ನು ಅತ್ತಿತ್ತ ತುಸು ತೀಡಿಕೊಳ್ಳುತ್ತಾ-
“ಈಗ ಹೆಂಡ ಇಳ್ಸೂಕೆ ಹೊಯ್ತ ಇದ್ದೀನಿ ಕಣ್ರಪ್ಪ. ಮರ ಹತ್ತಿದಾಗ ಒಂದೆರಡು ತೆಂಗಿನಮರದಲ್ಲಿ ಕಟ್ಟೀರೂ ಮಡಕೆಯಲ್ಲಿರೂ ಹೆಂಡನ ಅಲ್ಲೇ ಮೊದಲು ಕುಡ್ಕೋತಿನಿ. ಆಗ ಮಡಕೆ ಒಳಗೆ ಹುಳ-ಹುಪ್ಪಟ್ಟೆ ಬಿದ್ದಿರ್‍ತವಲ್ಲ…ಅವು ಸೋಸೋಗ್ಲಿ ಅಂತ ಹಿಂಗೆ ಜೋರಾಗಿ ಮೀಸೆ ಬುಟ್ಟಿವ್ನಿ” ಎಂದು ತನ್ನ ಕಲ್ಲಿಮೀಸೆಯ ಹಿನ್ನಲೆಯನ್ನು ಬಣ್ಣಿಸಿದ.
ನಮ್ಮೂರ ದಲಿತರವನಾದ ಕರಿಯ ಮತ್ತು ನಾನು… ಸರಿ ಸುಮಾರು ಒಂದೇ ವಯಸ್ಸಿನವರು. ಜಮೀನ್ದಾರರ ಮಗನಾದ ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಆತ ಜೀತದ ಆಳಾಗಿ ದುಡಿಯುತ್ತಿದ್ದ. ಬೇಸಿಗೆ ರಜೆಯಲ್ಲಿ ನಾನು ಊರಿಗೆ ಹೋದಾಗಲೆಲ್ಲಾ, ಆತ ನನ್ನೊಡನೆ ಬಹಳ ಸರಸವಾಗಿ ಮಾತನಾಡುತ್ತಿದ್ದ. ಅದೇ ಬಗೆಯ ನಗೆನುಡಿಯ ನಡವಳಿಕೆಯನ್ನು ತನ್ನ ಕಡು ಬಡತನದ ಜೀವನದ ಉದ್ದಕ್ಕೂ ಉಳಿಸಿಕೊಂಡು ಬಂದಿದ್ದ. ಕಳೆದ ಇಪ್ಪತ್ತು ವರುಶಗಳ ಹಿಂದೆ ಕರಿಯ ಹೇಳಿದ ಕತೆಯೊಂದನ್ನು ನಾನು ಮರೆಯಲಾಗುತ್ತಿಲ್ಲ. ಮತ್ತೆ ಮತ್ತೆ ಅದು ನನ್ನ ಮನಸ್ಸನ್ನು ಕಾಡುತ್ತಿರುತ್ತದೆ. ಅಂದು ಕರಿಯನೊಡನೆ ಅದು-ಇದು ಮಾತನಾಡುತ್ತಾ-
“ಏನ್ ಕರಿಯ…ಈಗಲಾದ್ರು ಚೆನ್ನಾಗಿದ್ದೀಯಾ?”ಎಂದೆ.
“ಅಯ್ಯೋ ಬನ್ರಪ್ಪ… ನಮ್ ಚೆಂದವ ಏನ್ ಕೇಳೀರಿ? ನೀವ್ ಚೆನ್ನಾಗಿದ್ರೆ ಸರಿ… ಎಲ್ಲಾನು ಕೇಳ್ಕೊಂಡು ಬಂದಿರೂರು.”
“ಕೇಳ್ಕೊಂಡು ಬಂದಿರೂರು ಅಂದ್ರೆ… ಏನ್ ಕರಿಯ?”
“ನಿಮಗೆ ಗೊತ್ತಿಲ್ವೆ ಆ ಕತೆ?”
“ಯಾವ ಕತೆ?”
ಕರಿಯ ತನ್ನ ಕಯ್ಯನ್ನು ಮುಗಿಲ ಕಡೆಗೆ ತೋರಿಸುತ್ತಾ… ಕತೆಯನ್ನು ಹೇಳತೊಡಗಿದ.
“ಅಲ್ಲಿ ಮೇಲ್ಗಡೆ ಲೋಕದಲ್ಲಿರೋ ಬ್ರಹ್ಮನಿಗೆ ಈ ಬುವಿಯಲ್ಲಿ ಎಲ್ಲಾ ತರದ ಹಕ್ಕಿಪಕ್ಕಿ ಪ್ರಾಣಿಗಳನ್ನು ಹುಟ್ಟುವಂಗೆ ಮಾಡಿದ ಮ್ಯಾಲೆ, ನರಮನಸರನ್ನ ಕಳಿಸಬೇಕು ಅಂತ ಅನ್ನಿಸತಂತೆ. ಸರಿ, ಒಳ್ಳೆ ಮಣ್ಣು ತಕೊಂಡು ಚೆನ್ನಾಗಿ ಮಿದ್ದಿ, ಹದ ಮಾಡ್ಕೊಂಡು, ಆಮೇಲೆ ಒಸೊಸಿ ತಕೊಂಡು…. ಕಣ್ಣು ಕಿವಿ ಮೂಗು ಎಲ್ಲಾನು ತಿದ್ದಿ ತೀಡಿ, ಮನುಸನ ಆಕಾರದ ಬೊಂಬೆಗಳ ಮಾಡಿ, ಜೀವ ತುಂಬಿ… ಮೊದಲು ಕಳೂಸೂಕೆ ನಿಮ್ಮನ್ನೆಲ್ಲಾ ಅಣಿ ಮಾಡಿದನಂತೆ…”
ಕರಿಯನ ಕತೆಯ ನಿರೂಪಣೆಗೆ ನಾನು ತುಸು ತಡೆಯೊಡ್ಡುತ್ತಾ-
“ನಮ್ ಜತೇಲೆ ನಿಮ್ಮನ್ನೂ ಕಳುಹಿಸಿಲಿಲ್ಲವೇ?”
“ಇಲ್ಲ ಕಣ್ರಪ್ಪ. ನಮ್ಮ ನಿಮ್ಮನ್ನೆಲ್ಲಾ ಒಂದೇ ಮಣ್ಣಲ್ಲಿ ಕಲಸಿ ಮಾಡುದ್ರು… ಅದ್ಯಾಕೊ…. ಏನೋ…. ಮೊದಲು ನಿಮ್ಮ… ಅಂದ್ರೆ ಮೇಲು ಜಾತಿಯವರನ್ನು ಮೊದಲು ಇಲ್ಲಿಗೆ ಕಳೂಸೂಕೆ ಮನಸ್ಸು ಮಾಡಿದ.”
“ಹಂಗಾದ್ರೆ ಒಂದೊಂದು ಜಾತಿಯವರನ್ನ ಒಂದೊಂದು ಗುಂಪಾಗಿ ಬೇರೆ ಬೇರೆ ವಿಂಗಡ ಮಾಡಿ, ಆ ಬ್ರಹ್ಮ ಇಲ್ಲಿಗೆ ಕಳಸವ್ನೆ ಅಂತೀಯಾ?”
“ಹಂಗೆ ಅನ್ಕೊಳಿ… ಮೊದಲು ನಿಮ್ಮ ಮಾಡಿ ಹೋಗ್ರಪ್ಪ ನರಲೋಕಕ್ಕೆ ಅಂದ… ಆಗ ನೀವು… ನರಲೋಕಕ್ಕೆ ಹೋಗು ಅಂತೀಯಲ್ಲ, ಅಲ್ಲಿ ನಾವು ಎಲ್ಲಿರೋಣ? ಅಂತ ಕೇಳುದ್ರಿ… ತಕೊಳಿ ಮನೆ ಅಂದ. ಆಮೇಲೆ ನೀವು… ಅಲ್ಲಿ ಉಣ್ಣೋಕೆ ತಿನ್ನೋಕೆ ಏನ್ ಮಾಡ್ಮ ಅಂದ್ರಿ… ದಿನಸಿ ಬೆಳ್ಕೊಂಡು ತಿನ್ನೋಕೆ ಹೊಲ ಗದ್ದೆ ತೋಟ ಕೊಡ್ತೀನಿ ಹೋಗಿ ಅಂದ… ಮತ್ತೆ ಬಟ್ಟೆ ಬರೆ ಮೇಲ್ ವೆಚ್ಚಕ್ಕೆ ಏನ್ ದಾರಿ ಅಂತ ತಿರ್‍ಗ ಬ್ರಹ್ಮನ್ನ ಕೇಳುದ್ರಿ… ಚಿನ್ನ ಬೆಳ್ಳಿ ನಗ ನಾಣ್ಯ ತಕೊಂಡು ಇಲ್ಲಿಂದ ಹೊರಡಿ ಅಂದ. ಹಿಂಗೆ ನೀವು ಅಲ್ಲಿಂದ ಇಲ್ಲಿಗೆ ಬರೋಕ್ ಮುಂಚೇನೆ ತಲೆ ಚೆನ್ನಾಗಿ ಓಡಿಸಿ, ಇಲ್ಲಿರೂಕೆ ಏನೇನ್ ಅನುಕೂಲ ಬೇಕೋ… ಅವೆಲ್ಲಾನೂ ಕೇಳ್ಕೊಂಡು ಬಂದ್ರಿ… ನೀವೆಲ್ಲಾ ಇಲ್ಲಿಗೆ ಬಂದಾದ್ಮೇಲೆ… ನಮ್ಮನ್ನ ಅಣಿ ಮಾಡಿ, ಜೀವ ತುಂಬಿ… ಹೋಗ್ರಪ್ಪ ನರಲೋಕಕ್ಕೆ ಅಂದ… ಅವನು ಹಂಗೆ ಅಂದದ್ದೆ ತಡ… ಬಿದ್ದಂಬೀಳ ನಾವೆಲ್ಲಾ ದಡಾರನೆ ಅಲ್ಲಿಂದ ಇಲ್ಲಿಗೆ ಬಂದ್ಬುಟ್ಟೊ… ಇಲ್ಲಿಗೆ ಬಂದು ನೋಡ್ತೀವಿ… ಎಲ್ಲಾನು ನೀವೇ ಆವರಿಸ್ಕೊಂಡು ಕುಂತಿದ್ದೀರಿ! ಈಗ ಬ್ರಹ್ಮನ್ನ ಕೇಳವ ಅಂದ್ರೆ… ಅವನು ಅಲ್ಲಿ ಮೇಲವ್ನೆ… ನಾವು ಇಲ್ಲಿ ಕೆಳಗಿದ್ದೀವಿ… ಅದಕ್ಕೆ ಕಣ್ರಪ್ಪ… ನಿಮ್ಮನ್ನೆಲ್ಲಾ ಕೇಳ್ಕೊಂಡು ಬಂದಿರೂರು ಅಂತ ಅನ್ನೋದು”
ಕರಿಯ ಹೇಳಿದ ಪುರಾಣದ ನುಡಿಗಟ್ಟಿನ ಕತೆಯ ಒಡಲಾಳದಲ್ಲಿ… ಜಾತಿಯೊಂದರ ಕಾರಣದಿಂದಲೇ ನೂರಾರು ವರುಶಗಳಿಂದಲೂ ವಿದ್ಯೆ-ಸಂಪತ್ತು-ಆಡಳಿತದ ಗದ್ದುಗೆಯಿಂದ ದೂರವಾಗಿ, ಹಸಿವು-ಬಡತನ-ಅಪಮಾನಗಳಿಂದ ಬೇಯುತ್ತಿದ್ದ ಸಮುದಾಯವೊಂದರ ನೋವು ತುಂಬಿತ್ತು.

ಕಿವುಡಿಯ ನಂಬಿಕೆ



ಮೂರು ಮಂದಿ ಮಕ್ಕಳು ಮತ್ತು ಗಂಡನೊಡನೆ ಸಂಸಾರ ಮಾಡುತ್ತಿರುವ ಕಿವುಡಿ…..ಸುಮಾರು ನಲವತ್ತು ವರುಶದ ಹೆಂಗಸು. ಜಾತಿಯಿಂದ ಒಡ್ಡರವಳು , ತಾಯ್ನುಡಿ ತಮಿಳು. ಇವಳಿಗೆ ಕಿವಿ ತುಸು ಮಂದವಾಗಿದ್ದುದರಿಂದ ’ಕಿವುಡಿ’ಎಂಬ ಅಡ್ಡ ಹೆಸರು ಶಾಶ್ವತವಾಗಿ ಅಂಟಿಕೊಂಡಿತ್ತು. ತಮಿಳ್ನಾಡಿನಿಂದ ಮದ್ದೂರಿಗೆ ಬಂದು ನೆಲೆಸಿ, ಹತ್ತಾರು ವರುಶಗಳಾಗಿದ್ದುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾಳೆ. ಇವಳ ಸಂಸಾರದ ತೇರು ಕೂಲಿಯ ಕಾಯಕದಿಂದ ಉರುಳುತ್ತಿದೆ. ಕಿವುಡಿ ಅಕ್ಕರದ ಅರಿವಿಲ್ಲದ ಮಡ್ಡಿ.

ಒಂದು ದಿನ ನಮ್ಮ ಮನೆಗೆ ಅಕ್ಕಿ ಮಾಡುವುದಕ್ಕೆಂದು ಕಿವುಡಿ ಬಂದಿದ್ದಳು. ಸಾಯಂಕಾಲದವರೆಗೂ ಅಕ್ಕಿಯನ್ನು ಹಸನು ಮಾಡಿ, ಸಂಜೆ ಆರು ಗಂಟೆಯ ಸಮಯದಲ್ಲಿ ನಮ್ಮ ಮನೆಯಿಂದ ಹೊರಟಳು . ಅಕ್ಕಿಯನ್ನು ಹಸ ಮಾಡಿದ ಕೂಲಿಯಾಗಿ ಅವಳಿಗೆ ನುಚ್ಚಕ್ಕಿಯನ್ನು ಕೊಟ್ಟಿತ್ತು. ನುಚ್ಚಕ್ಕಿಯ ಆ ಗಂಟನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗುತ್ತಿರುವುದನ್ನು ಗಮನಿಸಿದ ನಾನು-
“ಇದೇನಮ್ಮ…..ಅಕ್ಕಿ ಗಂಟನ್ನ ಇಲ್ಲೇ ಬಿಟ್ಟು ಹೊಯ್ತಾ ಇದ್ದೀಯಾ ?”

“ಇವತ್ತು ಬ್ಯಾಡ ಸಾಮಿ…..ನಾಳೆ ತಕೊಂಡೊಯ್ತಿನಿ”.

“ಯಾಕಮ್ಮ?”

“ಇವತ್ತು ಶುಕ್ರವಾರ ಸಾಮಿ…..ಮುಸ್ಸಂಜೆ ಹೊತ್ನಲ್ಲಿ ಲಚ್ಮಿ ಮನೇಲಿ ಸಂಚಾರ ಇರ‍್ತಾಳೆ…..ಅದಕ್ಕೆ ಬ್ಯಾಡ. ನಾಳೆ ತಕೊಂಡೊಯ್ತಿನಿ”.

“ಏನಮ್ಮ ಹಂಗಂದ್ರೆ! ನಮ್ಮ ಮನೇಲಿ ಲಕ್ಶ್ಮಿ ಸಂಚಾರ ಇದ್ರೆ…..ನೀನ್ಯಾಕೆ ಅಕ್ಕಿ ತಕೊಂಡ್ ಹೋಗ್ಬಾರದು ? “

“ಅಕ್ಕಿ ಸಂಪತ್ತಿದ್ದಂಗೆ ಸಾಮಿ…..ಈಗ ನಾನು ಅಕ್ಕಿ ತಕೊಂಡು ಹೊರಟ್ರೆ…..ಲಚ್ಮಿ ನನ್ ಹಿಂದೇನೆ ನನ್ ಮನೇಗೆ ಬಂದ್ಬುಡ್ತಳೆ. ಆಗ ನಿಮ್ ಮನೆ ಬಡವಾಗ್ಹೋಯ್ತದೆ…..ಅದಕ್ಕೆ ಬ್ಯಾಡ”

“ಏನಮ್ಮ ನೀನ್ ಮಾತಾಡ್ತ ಇರೋದು? ಯಾವ ಲಕ್ಶ್ಮಿನೂ ಎಲ್ಲಿಗೂ ಹೋಗಲ್ಲ…..ಬರಲ್ಲ. ಅಲ್ಲಿ ಗುಡಿಸಲಲ್ಲಿ ನಿನ್ ಮಕ್ಕಳು ಹಸಗೊಂಡು ಇರ‍್ತವೆ. ಅವಕ್ಕೆ ಗಂಜಿ-ಗಿಂಜಿ ಮಾಡ್ಕೊಡೋದು ಬುಟ್ಬುಟ್ಟು…..ಬರೀ ಕಯ್ಯಲ್ಲಿ ಹೋಗ್ತಾ ಇದ್ದೀಯಲ್ಲಮ್ಮ ! “

“ಮಕ್ಕಳದು ಹೆಂಗೊ ಆಯ್ತದೆ ಸಾಮಿ”

“ಹೆಂಗೊ ಹೇಗಾಗುತ್ತಮ್ಮ? ಇಂತ ದಡ್ಡ ಕೆಲಸ ಮಾಡ್ಬೇಡ. ಮನೆಗೆ ಅಕ್ಕಿ ತಕೊಂಡು ಹೋಗು”

“ಸಾಮಿ, ನೀನ್ ಏನ್ ಹೇಳುದ್ರು…..ನಂಗೆ ಇವತ್ತು ಅಕ್ಕಿ ಬ್ಯಾಡ. ನಾಳೆ ಹೊತ್ತುಗು ಮುಂಚೇನೆ ಬಂದು ತಕೊಂಡೊಯ್ತಿನಿ” ಎಂದು ಹೇಳಿ, ಬರಿ ಕಯ್ಯಲ್ಲಿ ಹೊರಟೇ ಹೋದಳು .

ಕಿವುಡಿಯ ವರ‍್ತನೆಯನ್ನು ಕಂಡು ನನಗೆ ಅಚ್ಚರಿ ಮತ್ತು ಆಕ್ರೋಶಗಳೆರಡೂ ಒಂದೇ ಕಾಲದಲ್ಲಿ ಉಂಟಾದವು. ಕಿವುಡಿಯ ಮನದಲ್ಲಿನ ಲಕ್ಶ್ಮಿಯ ಬಗೆಗಿನ ನಂಬಿಕೆಯು ಹೆಡ್ಡತನದಿಂದ ಕೂಡಿದೆ. ಅವಳಿಗೆ ಸರಿಯಾದ ತಿಳುವಳಿಕೆಯಿಲ್ಲದಿರುವುದು ಇಂತಹ ನಡವಳಿಕೆಗೆ ಕಾರಣವಾಗಿದೆ. ಆದರೆ ಕಡು ಬಡವಳಾದ ಆಕೆಯ ತಿಳಿಗೇಡಿತನದ ಹಿನ್ನಲೆಯಲ್ಲಿರುವ ತಾನು ದುಡಿಯುತ್ತಿರುವ ನೆಲೆ ಹಾಳಾಗಬಾರದೆಂಬ ಆಶಯವನ್ನು ಗುರುತಿಸಿ ಒಂದು ಗಳಿಗೆ ಮೂಕನಾದೆ. ಕಿವುಡಿಯು ತನ್ನ ಜೀವನದಲ್ಲಿ ಹೊಂದಿರುವ ಈ ಮಟ್ಟದ ಆದರ‍್ಶದ ಹಂಬಲ ನನ್ನಲ್ಲಿ ಇದೆಯೇ ಎಂಬ ಪ್ರಶ್ನೆಗೆ-
“ಇಲ್ಲ” ವೆಂಬುದೇ ಉತ್ತರ.

ಮುದ್ದೆಗಂಟು

ಸುಮಾರು   ನಲವತ್ತು   ವರುಶಗಳ   ಹಿಂದೆ   ನಡೆದ   ಪ್ರಸಂಗವಿದು. ಮಳೆ-ಬೆಳೆ   ಹೋಗಿ   ಬರಗಾಲ   ಬಂದಿತ್ತು. ಮಳೆರಾಯನನ್ನೇ   ನಂಬಿದ್ದ   ಚನ್ನಪಟ್ಟಣದ   ಆಸುಪಾಸಿನ   ಹಳ್ಳಿಗಳ   ಬವಣೆಯಂತೂ   ಹೇಳತೀರದಾಗಿತ್ತು. ಬೆಳೆಯಿಲ್ಲದ  ಬೇಸಾಯಗಾರರ    ಮತ್ತು   ಮೇವಿಲ್ಲದ   ದನಕರುಗಳ   ಗೋಳು   ಮುಗಿಲನ್ನು   ಮುಟ್ಟುವಂತಿತ್ತು. ಕೂಲಿ-ನಾಲಿ   ಮಾಡಿ   ಹೊಟ್ಟೆಹೊರೆದುಕೊಳ್ಳುವ   ಬಡವರ  ಒಡಲಿನ  ಸಂಕಟ, ನೊಂದವರಿಗೆ  ಮಾತ್ರ  ತಿಳಿಯುತ್ತಿತ್ತು.
ಇಂತಹ   ದಿನಗಳಲ್ಲಿ  ಸರ್‍ಕಾರವು  ಸಣ್ಣ ಪುಟ್ಟ   ಕಾಮಗಾರಿ   ಕೆಲಸವನ್ನು   ಮಂಜೂರು   ಮಾಡಿ, ದುಡಿಯುವ   ಬಡವರ   ಪಾಲಿಗೆ  ಅಂಬಲಿ   ದೊರೆಯುವಂತೆ   ಮಾಡಿತ್ತು.  ಕಾಮಗಾರಿ   ನಡೆಯುತ್ತಿದ್ದ   ಒಂದು  ಜಾಗದಲ್ಲಿ   ಒಬ್ಬ  ಮೇಸ್ತ್ರಿ  ಇದ್ದನು. ಕೆರೆಯ   ಹೂಳನ್ನೆತ್ತುವ   ಕೆಲಸಕ್ಕೆ   ಬರುವ  ಪ್ರತಿಯೊಬ್ಬ   ಕೂಲಿಯು   ನಡು ಮದ್ದೀನದಲ್ಲಿ   ಉಣ್ಣುವುದಕ್ಕೆ   ಬುತ್ತಿಯನ್ನು  ಕಡ್ಡಾಯವಾಗಿ   ತರಬೇಕಿತ್ತು. ಕೂಲಿಯಾಳುಗಳ  ಬುತ್ತಿಯೆಂದರೆ.. ಇನ್ನೇನು ‘ರಾಗಿಮುದ್ದೆ‘.
ಮುದ್ದೆಗಂಟನ್ನು  ಜತೆಯಲ್ಲಿ   ತಂದರೆ   ಮಾತ್ರ, ಆತನಲ್ಲಿ   ಕೆಲಸ   ದೊರೆಯುತ್ತಿತ್ತು.  ತರಲಿಲ್ಲವೆಂದರೆ   ಯಾವ   ಮುಲಾಜನ್ನೂ   ತೋರಿಸದೆ, ಹಿಂದಕ್ಕೆ  ಅಟ್ಟುತ್ತಿದ್ದ.  ಬೆಳಗಿನ  ಎಂಟು  ಗಂಟೆಯಿಂದ   ಸಂಜೆ  ಅಯ್ದು   ಗಂಟೆಯ   ತನಕ   ದುಡಿಯುವ   ಆಳುಗಳು   ಹಸಿದುಕೊಂಡು    ಇರಬಾರದೆಂಬ   ಕರುಣೆಯೋ   ಇಲ್ಲವೇ   ಹೊಟ್ಟೆಗೇನೂ   ಇಲ್ಲದಿದ್ದರೆ, ನಡು ಹಗಲಿನ  ನಂತರದ    ಕೆಲಸವನ್ನು  ಸರಿಯಾಗಿ  ಮಾಡಲಾರರೆಂಬ   ಉದ್ದೇಶದಿಂದಲೋ.. ಅಂತು   ಈ  ಬಗೆಯ   ತನ್ನದೇ    ಆದ   ಕಾನೂನನ್ನು   ಬಹಳ   ಕಟ್ಟುನಿಟ್ಟಾಗಿ   ಮೇಸ್ತ್ರಿಯು   ಜಾರಿಗೆ  ತಂದಿದ್ದ.
ಇವನ   ಬಳಿ   ಕೆಲಸಕ್ಕೆ   ಬರುತ್ತಿದ್ದ   ನೂರಾರು   ಹೆಣ್ಣಾಳುಗಳಲ್ಲಿ    ಹೊಂಬಾಳೆಯು   ಒಬ್ಬಳು.  ಸುಮಾರು  ಮೂವತ್ತರ  ಹರೆಯದ   ಈಕೆಯು  ಯಾರೊಬ್ಬರ   ಜತೆಯಲ್ಲೂ   ಬೆರೆಯುತ್ತಿರಲಿಲ್ಲ   ಮತ್ತು  ಹೆಚ್ಚು   ಮಾತನಾಡುತ್ತಿರಲಿಲ್ಲ. ಇತರ   ಕೂಲಿಯಾಳುಗಳಂತೆ   ತನ್ನ   ಕಯ್ಯಲ್ಲಿರುವ   ಮುದ್ದೆಗಂಟನ್ನು  ಮೇಸ್ತ್ರಿಗೆ   ತೋರಿಸಿ,  ಬೇಲಿಯ   ಬುಡದಲ್ಲಿ   ಗಂಟನ್ನಿಟ್ಟು   ಕೆಲಸದಲ್ಲಿ  ತೊಡಗುತ್ತಿದ್ದಳು. ಉಣ್ಣುವುದಕ್ಕೆ   ಬಿಡುವು   ಕೊಟ್ಟಾಗ, ತನ್ನ  ಮುದ್ದೆಗಂಟನ್ನು   ಎತ್ತಿಕೊಂಡು,  ಎಲ್ಲರಿಂದ   ದೂರ  ಹೋಗಿ,  ಬೇಲಿಯೊಂದರ  ಮರೆಯಲ್ಲಿ   ಕುಳಿತು  ಉಂಡು  ಬಂದು, ಮಡಕೆಗಳಲ್ಲಿ    ತುಂಬಿಟ್ಟಿದ್ದ   ನೀರನ್ನು   ಕುಡಿದು,  ಮತ್ತೆ   ಸಂಜೆಯವರೆಗೂ  ದುಡಿಯುತ್ತಿದ್ದಳು.  ಹೊಂಬಾಳೆಯನ್ನು   ಮೊದಮೊದಲು   ಯಾರೂ   ಗಮನಿಸುತ್ತಿರಲಿಲ್ಲ.  ಹತ್ತಿಪ್ಪತ್ತು   ದಿನಗಳ   ನಂತರ    ಕೆಲವು   ಹೆಂಗಸರು –
“ಇದ್ಯಾಕೆ  ಇವಳೊಬ್ಬಳೇ   ಹಿಂಗೆ   ಬೇಲಿ   ಮರೆಗೆ   ಹೊಯ್ತಳಲ್ಲ!  ಅದೇನ್   ತಿಂದಳೊ   ಕಾಣೆ!   ನಮ್  ಜತೇಲಿ   ಕುಂತ್ಕೊಂಡು   ಉಂಡ್ರೆ ಇವಳ್ಗೆ   ಹೊಟ್ಟೆನೋವು   ಬಂದದೆ?“ ಎಂದು   ತಮ್ಮತಮ್ಮಲ್ಲಿಯೇ   ಆಡಿಕೊಳ್ಳತೊಡಗಿದರು.  ಇವರಲ್ಲಿ   ಒಬ್ಬಳು   ಕುತೂಹಲವನ್ನು   ಹತ್ತಿಕ್ಕಲಾರದೆ,  ಒಂದು   ದಿನ   ಉಣ್ಣುವ   ಹೊತ್ತಿನಲ್ಲಿ   ಹೊಂಬಾಳೆಗೆ   ಕಾಣದಂತೆ, ಬೇಲಿಯ   ಮರೆಯಲ್ಲಿ   ಅಡಗಿಕೊಂಡು   ಕುಳಿತಳು.
ಹೊಂಬಾಳೆ   ಬಂದವಳೇ, ಬೇಲಿಯ   ಬುಡದಲ್ಲಿ   ಕುಳಿತುಕೊಂಡು ಅತ್ತಗೆ.. ಇತ್ತಗೆ..    ನಾಲ್ಕಾರು  ಸಾರಿ  ತಿರುತಿರುಗಿ   ನೋಡಿದಳು. ಅನಂತರ   ಗಂಟನ್ನು   ಬಿಚ್ಚಿ,  ಮುದ್ದೆಯನ್ನು  ಸಣ್ಣಸಣ್ಣದಾಗಿ   ಮುರಿಮುರಿದು    ಆ  ಕಡೆ.. ಈ   ಕಡೆ   ಎಸೆದಳು. ಕೊಂಚ  ಹೊತ್ತು  ಸುಮ್ಮನೆ   ಕುಳಿತಿದ್ದಳು.  ಆಮೇಲೆ   ಗಂಟು  ಬಿಚ್ಚಿದ   ಬಟ್ಟೆಯನ್ನು   ಹಿಡಿದುಕೊಂಡು, ಕುಡಿಯುವ   ನೀರಿನ   ಮಡಕೆಯ   ಬಳಿಗೆ   ಬಂದು,  ಹೊಟ್ಟೆ   ತುಂಬ   ನೀರನ್ನು   ಕುಡಿದಳು.  ಇದುವರೆಗೆ   ಇದೆಲ್ಲವನ್ನೂ   ಕದ್ದು   ನೋಡುತ್ತಿದ್ದವಳು   ಎದ್ದು   ಹೋಗಿ,  ಹೊಂಬಾಳೆಯು   ಎಸೆದಿದ್ದ   ಉಂಡೆಗಳನ್ನು   ನೋಡಿದರೆ.. ಅವು   ಹಿಟ್ಟಿನ  ಉಂಡೆಗಳಲ್ಲ.. ಮಣ್ಣಿನ   ಉಂಡೆಗಳು!  ಸೀದಾ   ಬಂದವಳೆ, ಮೇಸ್ತ್ರಿಯನ್ನು    ಕರೆದುಕೊಂಡು   ಹೋಗಿ, ಅವನ್ನು  ತೋರಿಸಿದಳು.  ಅಲ್ಲಿ  ಬಿದ್ದಿದ್ದ  ನಾಲ್ಕಾರು   ಮಣ್ಣಿನ  ಉಂಡೆಗಳನ್ನು   ಎತ್ತಿಕೊಂಡ   ಮೇಸ್ತ್ರಿಯು   ನೇರವಾಗಿ   ಹೊಂಬಾಳೆಯ   ಹತ್ತಿರಕ್ಕೆ   ಬಂದು, ಅವುಗಳನ್ನು   ಅವಳ   ಮುಸುಡಿಯತ್ತ   ಹಿಡಿದು-
“ಇವೇನಮ್ಮಿ.. ದಿವಸ   ನೀನ್   ತಿಂತಾಯಿದ್ದುದ್ದು.. ಈ   ಮುದ್ದೇನಾ! ವಾರಕ್ಕೆ   ಒಂದು  ದಪ   ಕೊಡು   ಕೂಲಿ  ದುಡ್ಡ   ಏನ್   ಮಾಡೀಯಮ್ಮಿ?”  ಎಂದು   ಅಬ್ಬರಿಸಿದ. ತನ್ನ  ಗುಟ್ಟು  ರಟ್ಟಾಗಿ  ಉಂಟಾದ   ಇಕ್ಕಟ್ಟಿಗಿಂತಲೂ,  ಕೂಲಿಯು   ಎಲ್ಲಿ   ಕಯ್  ತಪ್ಪಿ   ಹೋಗುವುದೋ   ಎಂಬ  ಹೆದರಿಕೆಯಿಂದ    ಕಂಗಾಲಾದ   ಹೊಂಬಾಳೆಯು-
“ಅಪ್ಪೋ.. ನೀನು  ತೆಪ್ಪು   ತಿಳಿಬ್ಯಾಡ   ಕನಪ್ಪ.  ನನ್  ಗಂಡ  ಕಾಯ್ಲೆ   ಮನ್ಸ.  ಅವನ  ಕಯ್ಯಲ್ಲಿ  ದುಡ್ಕೊಂಡು   ತಿನ್ನೋಕೆ   ಆಗೂದಿಲ್ಲ. ಇನ್ನೇನು  ಸಾಯುವಂಗೆ  ಆಗ್ಬುಟ್ಟವ್ನೆ.  ನಮಗೆ  ಎರಡು  ಚಿಕ್ಕ  ಹಯ್ಕಳು  ಅವೆ  ಕನಪ್ಪ. ನೀನ್  ವಾರಕ್ಕೆ  ಒಂದ್ಸತಿ   ಕೊಟ್ಟ  ದುಡ್ಡಲಿ  ರಾಗಿ  ತಂದ್ಕೊಂಡು, ಇಳ್ಳೊತ್ತನಲ್ಲಿ   ಒಂದು  ದಪ  ಒಲೆ  ಹತ್ತಿಸಿ,  ಮುದ್ದೆ   ಮಾಡ್ಕೊಂಡು  ಮನೆಜನವೆಲ್ಲಾ   ಉಣ್ತೀವಿ   ಕನಪ್ಪ. ಉಳಿದ  ತಂಗಳ  ಹೊತಾರೆ  ಉಣ್ಕೊಂಡು,  ಮಿಕ್ಕೊಕ್ಕುದ್ದ   ನನ್  ಗಂಡ  ಮಕ್ಕಳಿಗೆ  ಬುಟ್  ಬತ್ತೀನಿ   ಕನಪ್ಪ. ಅದನ್ನ   ನಾನು  ತಂದ್ಬುಟ್ರೆ   ಅವರ್‍ಗೆ   ಏನೂ  ಇಲ್ದೆ  ಹೊಯ್ತದೆ. ನೀನು  ಇನ್ನೆಲ್ಲಿ   ಕೂಲಿಗೆ  ಕರಕೊಳ್ಳದೆ  ಹೋದೀಯೊ   ಅಂತ ನಿಂಗೆ   ತೋರ್‍ಸುಕೆ   ಮಣ್ಣಿನ  ಮುದ್ದೆ  ಕಟ್ಕೊಂಡು  ತತ್ತಿದ್ದೆ   ಕನಪ್ಪ.  ಈಗ  ಹೆಂಗೊ  ಒಂದೊತ್ತು  ಒಲೆ  ಉರೀತಾದೆ ನಿನ್  ದಮ್ಮಯ್ಯ   ಅಂತೀನಿ   ಕನಪ್ಪ ಅದ  ತಪ್ಪಿಸ್ಬೇಡ“  ಎಂದು  ಬಿಕ್ಕಳಿಸುತ್ತಾ, ಮೇಸ್ತ್ರಿಯ   ಮುಂದೆ  ಕುಸಿದಳು.